ಪ್ರತಿಫಲವೇ?
“ಅಮ್ಮಾ, ದಯವಿಟ್ಟು ಸಹಾಯ ಮಾಡಿ, ತಪ್ಪು ತಿಳಿಯಬೇಡಿ. ನಾನು ಭಿಕ್ಷುಕಿಯಲ್ಲ. ನನ್ನ ಮಗುವಿನ ಆರೋಗ್ಯಕ್ಕೋಸ್ಕರ, ಭಿಕ್ಷೆ ಬೇಡಿ ಬಂದ ಹಣದಿಂದ ಪ್ರಸಿದ್ಧ ದೇವಾಲಯದ ದೇವರ ದರ್ಶನ ಮಾಡುವೆನೆಂದು ಹರಕೆ ಹೊತ್ತಿರುವೆ” ಎಂದು ಅಂಗಲಾಚಿದ ಆ ಮಹಿಳೆಯ ಕೈಗೆ ನೂರು ರೂಪಾಯಿ ಕೊಟ್ಟಳು ಸರಿತಾ. ಅದೇ ದಿನ, ದೇವಿ ದೇವಸ್ಥಾನಕ್ಕೆ ಹೋಗಿದ್ದ ಸರಿತಾಳನ್ನು ಕರೆದ ಅರ್ಚಕರು “ತಗೊಳ್ಳಿ ಅಮ್ಮ, ದೇವಿಯ ಪ್ರಸಾದ. ಈ ದಿನ ನಿಮಗೆ ಕೊಡಲು ದೇವಿಯ ಪ್ರೇರಣೆಯಾಗಿದೆ” ಅಂತ ರೇಶ್ಮೆ ಸೀರೆಯೊಂದನ್ನು ಕೈಗಿತ್ತರು. ಇದು ಪ್ರತಿಫಲವೇ?
ಮೂಕವಾಯ್ತು ಮನ
ಯಾವುದೋ ಹಬ್ಬದ ಆಚರಣೆಗೆಂದು ಊರಿಗೆ ಹೋಗಿದ್ದಳು ವನಿತಾ. ಮಗಳಂದಿರಿಗೆ, ಘಮಘಮಿಸುವ ತುಪ್ಪದ ದೊಡ್ಡ ದೊಡ್ಡ ಬಾಟಲಿಗಳನ್ನಿತ್ತ, ಅತ್ತೆ ತನಗೂ ಕೊಡಬಹುದೆಂಬ ಸಣ್ಣ ನಿರೀಕ್ಷೆಯೂ ಹುಸಿ. ಮನೆಗೋಸ್ಕರ ಸುರಿದ ಹಣಕ್ಕೆ ಲೆಕ್ಕವೇ ಇಲ್ಲ. ಆದರೂ ಅತ್ತೆ ಅತ್ತೆಯೇ. ಮನದೊಳಗೆ ನೊಂದುಕೊಂಡಳು ವನಿತಾ. ಊರಿನಿಂದ ಹಿಂತಿರುಗಿದ ಸ್ವಲ್ಪ ಹೊತ್ತಿನಲ್ಲೇ ವನಿತಾಳ ಮೊಬೈಲಿಗೆ ಒಂದು ಕರೆ . “ನಾವು ದಿನಾಲೂ ಹಸುವಿನ ಹಾಲು ಹಾಕಿಸಿಕೊಳ್ಳೋದು. ಒಳ್ಳೆ ಬೆಣ್ಣೆ ಬರುತ್ತದೆ. ನಿಮ್ಮ ಸಣ್ಣ ಮಕ್ಕಳ ನೆನಪಾಯಿತು. ದಯವಿಟ್ಟು ಬಂದು ತುಪ್ಪ ತೆಗೆದುಕೊಂಡು ಹೋಗಿ. ಆದರೆ ಒಂದು ಮಾತು- ನೀವು ಹಣ ಕೊಡಬಾರದು”. ಯಾವಾಗಲೋ ಒಮ್ಮೆ ಅವರ ಮಗಳಿಗೆ ಅರ್ಥವಾಗದ ಪಾಠವನ್ನು ಹೇಳಿಕೊಟ್ಟಿದ್ದಳು ವನಿತಾ. ವನಿತಾಳ ಮನ ಮೂಕವಾಯ್ತು.