ಕವಿತೆ ಹುಟ್ಟುತ್ತದೆ
ರಚನೆ : ಯಲ್ಲಪ್ಪ ಸಾಲಿ ಚಿಂತಕುಂಟಾ
----------------------------------
ಭಗ್ನ ಹೃದಯದ ಗಾಯದೊಳಗೆ ಕತ್ತಲಿನಂತಿರುವ ನೆರಳ ಪ್ರತಿಬಿಂಬದೊಳಗೆ ಹರಿದ ಬಟ್ಟೆ ಉಟ್ಟು ಮನ ಬಿಚ್ಚಿ ನಗುವ ಅನಾಥ ಮಗುವಿನ ಮುಖ ಚಹರೆಯಲ್ಲಿ ಕವಿತೆ ಹುಟ್ಟುತ್ತದೆ! ಬಡವ ಬದುಕಿದ ಚಿಕ್ಕ ಚೊಕ್ಕ ಸೂರಿನೊಳಗೆ ರೈತ ಉಳುವ ಮೊನಚಾದ ನೇಗಿಲ ತುದಿಯೊಳಗೆ ಬಿಸಿಲು-ಮಳೆ-ಚಳಿ ಗಾಳಿ ಎನ್ನದೇ ದುಡಿವ ನೋವುಂಡ ಕಾರ್ಮಿಕನೆದೆಯ ಕೂಗು ಧ್ವನಿಸಿ ಕವಿತೆ ಹುಟ್ಟುತ್ತದೆ! ಮಾತುಗಳು ಮೌನವಾಗಿ ತುಟಿ ಬಿಗಿ ಹಿಡಿದಾಗ ಭಾವನೆಗೆ ಪೆಟ್ಟಾಗಿ ನೋವು ನರಕವಾದಾಗ ಪ್ರೀತಿ ಪ್ರೇಮ ಎಂಬುದು ಅತೀ ಆಪ್ತವಾದಾಗ ರಣ ಬೇಸಿಗೆಯಲ್ಲೂ ಹೀಗೊಂದು ಮಳೆ ಸುರಿಯುವಾಗ ಕವಿತೆ ಹುಟ್ಟುತ್ತದೆ! ಹೆಣ್ಣಿನ ಸೆರಗ ಹಿಡಿದು ಬದುಕು ಮುರಿವ ಸಮಾಜದೊಳಿಹ ಕಾಮುಕರ ಅಮಾನವೀಯತೆಗೆ ಬಂಡೆದ್ದು, ಬಗೆದು, ಅಗೆದು, ಊಳುವಷ್ಟು ಕೋಪ ನೆತ್ತಿಗೇರಿ ಕುದಿಯುವ ರಕ್ತದೊಳಗೆ ನನ್ನ ಬಂಡಾಯದ ಕವಿತೆ ಹುಟ್ಟುತ್ತದೆ!
----------------------------------
ನೋಂದಣಿ ಐಡಿ : KPF-S1-5893
