ಹುಡುಕಾಟವೇನೆ ಜೀವನ!?

ಪ್ರಶ್ನೆ ಎಂದರೆ ಅದಕ್ಕೊಂದು ಉತ್ತರವಿರಲೇಬೇಕೇ? ಹಾಗಾದರೆ ಉತ್ತರ ಸಿಗದ ಪ್ರಶ್ನೆಗಳೇ ಇಲ್ಲವೇ? ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳು ಈ ಭೂಮಿಯಲ್ಲಿ ನಿಗೂಢವಾಗಿ ಅಡಗಿವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿಲ್ಲದಿದ್ದರೂ, ಉತ್ತರಕ್ಕೆ ಹತ್ತಿರವೆನಿಸುವ, ಉತ್ತರ ರೂಪದ ಉತ್ತರ ಸಿಗಬಹುದು, ಸಿಗದೆಯೂ ಇರಬಹುದು. ಇಂತಹ ಅತ್ಯಪರೂಪದ ಪ್ರಶ್ನೆ “ಬದುಕು” ಎಂದರೆ ಬಹುಶಹ ತಪ್ಪಾಗಲಾರದು.ಬದುಕೇ ಒಂದು ದೊಡ್ಡ ಪ್ರಶ್ನೆ, ಒಂದರ್ಥದಲ್ಲಿ Syllabus ಇಲ್ಲದೆ ಪರೀಕ್ಷೆ ಬರೆದ ಹಾಗೆ, ಈ ಪರೀಕ್ಷೆಯಲ್ಲಿ ಪೂರ್ವಭಾವಿ ಸಿದ್ಧತೆಗಳಿಲ್ಲ. ಜೀವನದುದ್ದಕ್ಕೂ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಸಾಗುವುದೇ ಜೀವನದ ವ್ಯಾಖ್ಯಾನ. ಒಂದು ರೀತಿ ಉತ್ತರ ಹುಡುಕುವುದೇ ಒಂದು ದೊಡ್ಡ ಸಾಧನೆ, ಉತ್ತರ ಸಿಕ್ಕಿತೂ ಎನ್ನುವ ಖಾತರಿಯೂ ಇರುವುದಿಲ್ಲ, ಒಂದು ವೇಳೆ ಉತ್ತರ ಸಿಕ್ಕರೂ, ಸಿಕ್ಕ ಉತ್ತರ ಸರಿಯಾಗಿರುವುದೆನ್ನುವುದು ಖಾತರಿಯಿರುವುದಿಲ್ಲ.ನಮಗೆ ಸಿಕ್ಕ ಉತ್ತರ ಎಲ್ಲರಿಗೂ ಸರಿ ಅನ್ನಿಸಬೇಕು ಅಂತಾನೂ ಇಲ್ಲ, ನನ್ನ ಉತ್ತರವೇ ಸರಿ ಎನ್ನುವ ಭ್ರಮೆಯಲ್ಲಿರುವುದೂ ಸರಿಯಲ್ಲ. ನಮಗೆ ಸಿಕ್ಕ ಉತ್ತರ ಮುಂದೊಂದು ದಿನ ತಪ್ಪಾಗಿರಬಹುದು ಮತ್ತು ನಮಗೆ ದೊರೆತ ಉತ್ತರದಿಂದ ನಾವು ಕೀರ್ತಿ ಮತ್ತು ಯಶಸ್ಸುಗಳನ್ನು ಪಡೆಯಲೂಬಹುದು. ಉತ್ತರ ಸರಿಯಿರಲಿ, ತಪ್ಪಿರಲಿ. ಸಿಗಲಿ, ಸಿಗದಿರಲಿ.ದಾರಿ ಸುಲಭದ್ದಾಗಿರಲಿ, ಕಠಿಣದ್ದಾಗಿರಲಿ. ಆದರೆ ಉತ್ತರ ಹುಡುಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಉತ್ತರ ಸುಲಭವಾಗಿ ದೊರೆಯುವುದೆಂದು ವಾಮಮಾರ್ಗ ಹಿಡಿಯಬಾರದು, ಉತ್ತರವನ್ನು ಅರಸುವ ಮಾರ್ಗ ಸನ್ಮಾರ್ಗದ್ದಾಗಿರಬೇಕು ಮತ್ತು ಶ್ರದ್ಧೆಯಿಂದ ಕೂಡಿರಬೇಕು. ಈ ರೀತಿ ಜೀವನದ ಹಲವು ಘಟ್ಟಗಳಲ್ಲಿ ಬಂದೊದಗಿದ ಪ್ರಶ್ನೆಗಳನ್ನು ಉತ್ತರಿಸುತ್ತಾ ಹೋದಾಗ ನಮ್ಮಲ್ಲಿನ ದ್ವಂದ್ವಗಳು ನಿವಾರಣೆಯಾಗುತ್ತವೆ.
ನಾನ್ಯಾರು? ನನ್ನ ಉದ್ದೇಶವೇನು? ಸಮಾಜಕ್ಕೆ ನನ್ನ ಕೊಡುಗೆಯೇನು? ಇಂತಹ ಹತ್ತು ಹಲವು ಪ್ರಶ್ನೆಗಳನ್ನು, ನಮ್ಮೊಳಗಿನ ಆಂತರ್ಯದ ವ್ಯಕ್ತಿಯನ್ನು(ವ್ಯಕ್ತಿಯನ್ನುವದಕ್ಕಿಂತ ಗುರು ಎಂದರೆ ತಪ್ಪಾಗಲಾರದು), ಒಮ್ಮೆ ಅವನನ್ನು ಪ್ರಶ್ನೆ ಕೇಳಿ ನೋಡಿ ಒಂದು ಪಕ್ಷ ನೀವು ಸುಳ್ಳಾಡಬಹುದು ಆದರೆ ಆ ಒಳಗಿನ ಗುರು ರೂಪದ ಅಂತರ್ಧ್ವನಿ ಎಂದಿಗೂ ಸುಳ್ಳಾಡುವುದಿಲ್ಲ. ಇಂಗ್ಲಿಷಿನಲ್ಲಿ ಒಂದು ಮಾತಿದೆ (Brain gets tired, but heart never gets tired), ನಿಮ್ಮ ಪ್ರಶ್ನೆಗಳನ್ನು ಸಾವಿರ ಆದರೂ, ಅವನ ಮುಂದೆ ತೆಗೆದುಕೊಂಡು ಹೋದರೆ ಸಾಕು, ಬೇಜಾರನ್ನು ವ್ಯಕ್ತಪಡಿಸದೆ ನಿಮ್ಮೆಲ್ಲ ಪ್ರಶ್ನೆಗಳಿಗೆ ಪ್ರಪಂಚದಲ್ಲಿ ಯಾರೂ ನೀಡದ ಸರಿಯಾದ ಉತ್ತರವನ್ನು ನೀಡುವನು. ಪ್ರತಿ ಬಾರಿ ನೀವು ತಪ್ಪು ಮಾಡುವ ಮೊದಲು, ಅವನು ನೀನು ಮಾಡುತ್ತಿರುವುದು ತಪ್ಪೂಯೆಂದು ಒಮ್ಮೆಯಾದರು ಎಚ್ಚರಿಸಿಯೇ ಇರುತ್ತಾನೆ, ಆಗಾಗ ಅವನು ಇದು ಸರಿ, ಇದು ತಪ್ಪು, ಇದು ಒಳ್ಳೆಯದು, ಇದನ್ನು ಮಾಡು, ಇದನ್ನು ಮಾಡಬೇಡ ಎಂದು ನಮ್ಮೊಳಗೆ ಒಂದು ಎಚ್ಚರಿಕೆಯ ಘಂಟೆಯನ್ನು ಆಗಾಗ ಬಾರಿಸುತ್ತಿರುತ್ತಾನೆ. ಆದರೂ ಅವನ ಮಾತು ಕೇಳದೆ, ಜಾಣರಾಗಲು ಹೋಗಿ ದಡ್ಡರಾಗಿ ಬಿಡುತ್ತೇವೆ.
ಯಾವುದೇ ಮನುಷ್ಯನಿಗಾಗಲಿ, ತಾನು ಮಾಡಿದ್ದು ತಪ್ಪು ಎಂದು ಹೇಳಿದಾಗ, ಅವನಿಗೆ ಸಿಟ್ಟು ಬರುವುದು ಸರ್ವೇ ಸಾಮಾನ್ಯ. ನನಗೆ ಎಲ್ಲವೂ ಗೊತ್ತು, ನನಗೆ ಎಲ್ಲವೂ ತಿಳಿದಿದೆ ಎನ್ನುವ ಅಹಂನಿಂದ ಬೀಗುತ್ತಿ. ಒಂದು ವೇಳೆ ನಮಗೆ ಎಲ್ಲವೂ ತಿಳಿದಿದ್ದರೆ, ನಾವು ದೇವರಾಗಿ ಬಿಡುತ್ತಿದ್ದೆವಲ್ಲವೇ?
ಇನ್ನಾದರೂ ನನಗೆ ಎಲ್ಲವೂ ಗೊತ್ತು, ಎಲ್ಲವೂ ತಿಳಿದಿದೆ ಎನ್ನುವುದನ್ನು ಬಿಟ್ಟುಬಿಡೋಣ.(Anyone who lives only for himself shall not be remembered by the world, anyone who lives for others shall not be forgotten), ಇನ್ನಾದರೂ ನಾನು ಎನ್ನುವ ಮೂಟೆಯನ್ನು ಕಳಚಿ, ನಮಗೋಸ್ಕರ ನಾವು ಬಾಳೋಣ, ನಮಗಾಗಿ ನಾವು ಬಾಳೋಣ, ನಮ್ಮಿಂದ ಸಮಾಜ ಬಾಳಲಿ, ಸಮಾಜದಿಂದ ನಮ್ಮ ಬಾಳು ಬೆಳಗಲಿ.

Leave a Comment

Your email address will not be published. Required fields are marked *