ರಜನಿಯ ಮೊಬೈಲ್ ಫೋನ್ ರಿಂಗಣಿಸುತ್ತಿತ್ತು. ಅಡುಗೆ ಕೆಲಸದಲ್ಲಿ ಮುಳುಗಿ ಹೋಗಿದ್ದಳವಳು. “ಲೇ ರಜನಿ, ನಿನ್ನ ಗೆಳತಿ ಅಂಬಿಕಾ ಕಾಲ್” ಅನ್ನುತ್ತಾ ಮೊಬೈಲನ್ನು ರಜನಿಯ ಕೈಗಿತ್ತರು ಅವಳ ಗಂಡ ಸುಧಾಮ. ಕೈ ಒರೆಸಿಕೊಂಡು ಫೋನ್ ಕರೆ ಸ್ವೀಕರಿಸಿದ ರಜನಿ “ಏನೇ ಅಂಬಿಕಾ, ಇಷ್ಟು ಹೊತ್ತಿಗೆ ಕರೆ ಮಾಡಿದ್ದೀಯಾ?ಏನು ವಿಶೇಷ? ಮನೆಯಲ್ಲಿ ಎಲ್ಲರೂ ಸೌಖ್ಯ ತಾನೇ?” ಅಂತ ಕೇಳಲಾರಂಭಿಸಿದಳು.
“ಒಂದೊಂದೇ ಪ್ರಶ್ನೆ ಕೇಳು ಮಾರಾಯ್ತಿ. ನೀನು ವಾಟ್ಸಾಪ್ ನೋಡುವುದೂ ಇಲ್ಲ. ನಾನು ನಿನ್ನೆ ಒಂದು ಹುಡುಗಿ ಫೋಟೋ ಕಳಿಸಿದ್ದೆ. ಫೋಟೋ ಮತ್ತೆ ನೋಡು. ಹುಡುಗಿ ರೂಪವಂತೆ, ಗುಣವಂತೆ, ಅದೂ ಅಲ್ಲದೆ ಒಳ್ಳೆಯ ಉದ್ಯೋಗದಲ್ಲಿದ್ದಾಳೆ. ಒಳ್ಳೆಯ ಮನೆತನವೂ. ನಿನ್ನ ಮಗ ಶಶಾಂಕನಿಗೆ ಒಳ್ಳೆ ಜೋಡಿ ಆಗಬಹುದು ಅನ್ನಿಸಿತು” ಅಂತ ಒಂದೇ ಉಸಿರಿಗೆ ಹೇಳಿ ಮುಗಿಸಿದಳು ಅಂಬಿಕಾ.
ರಜನಿಯ ಮುಖದಲ್ಲಿ ನೋವಿನ ಗೆರೆಗಳು ಮೂಡಿದರೂ ಸಾವರಿಸಿಕೊಂಡು “ಅಂಬಿಕಾ, ದಯವಿಟ್ಟು ತಪ್ಪು ತಿಳ್ಕೊಳ್ಳಬೇಡ. ಶಶಾಂಕನಿಗೆ ಮದುವೆಯ ವಯಸ್ಸಾಯಿತು ನಿಜ. ಆದರೆ ಅವನು ಮದುವೆಯ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಮದುವೆಯ ವಿಷಯ ಎತ್ತಿದರೆ ಮೌನವಾಗಿಬಿಡುತ್ತಾನೆ. ಮದುವೆ ಆಗುವುದು ಬಿಡುವುದು ನನ್ನ ನಿರ್ಧಾರ ಅಂತ ಖಡಾಖಂಡಿತವಾಗಿ ಹೇಳಿದ್ದಾನೆ. ದಯವಿಟ್ಟು ಮದುವೆ ವಿಷಯದಲ್ಲಿ ಒತ್ತಾಯ ಮಾಡಬೇಡಿ ಅಂತ ನಮ್ಮಿಬ್ಬರಿಗೂ ಹೇಳಿಬಿಟ್ಟಿದ್ದಾನೆ”. ಅಂದಳು ರಜನಿ.
“ಹುಡುಗಿ ಚೆನ್ನಾಗಿದ್ದಾಳೆ. ನಿನ್ನ ಮಗ ಶಶಾಂಕ್ ನೆನಪಾಯ್ತು. ಅದಕ್ಕೆ ಕೇಳಿದೆ. ದಯವಿಟ್ಟು ಬೇಸರಿಸಬೇಡ. ಈಗಿನ ಮಕ್ಕಳೇ ಹಾಗೆ. ಅವರ ಯೋಚನೆಗಳೇ ಬೇರೆ. ನಮ್ಮ ಯೋಚನೆಗಳಿಗಿಂತ ಭಿನ್ನವಾಗಿರುತ್ತವೆ. ನಿನಗೆ ನಾನು ಹೇಳಬೇಕೆಂದಿಲ್ಲ. ಲೆಬನಾನಿನ ಪ್ರಸಿದ್ಧ ಕವಿ, ಲೇಖಕನಾದ ಖಲೀಲ್ ಗಿಬ್ರಾನ್ ಹೇಳಿಲ್ಲವೇ? – “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ”, “ಅವರ ಆಲೋಚನೆಗಳೂ ಅವರದೇ ಹೊರತು ನಿಮ್ಮದಾಗಲು ಸಾಧ್ಯವಿಲ್ಲ” ಅಂತ. ಇನ್ನೊಮ್ಮೆ ಮಾತನಾಡುವೆ ರಜನಿ” ಅಂತ ದೂರವಾಣಿ ಕರೆ ತುಂಡರಿಸಿದಳು ಅಂಬಿಕಾ.
2
ರಜನಿ- ಸುಧಾಮ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಶಶಾಂಕ್ ಹಾಗೂ ಗೌತಮ್. ಅಣ್ಣ- ತಮ್ಮ ಮಧ್ಯೆ ಐದು ವರ್ಷಗಳ ಅಂತರ. ರಜನಿ ನಗರದ ಕಾಲೇಜೊಂದರಲ್ಲಿ ಇಂಗ್ಲೀಷ್ ಉಪನ್ಯಾಸಕಿ. ಸುಧಾಮ ಅವರ ತಂದೆ ನಡೆಸಿಕೊಂಡು ಹೋಗುತ್ತಿದ್ದ ಅಂಗಡಿ ವ್ಯವಹಾರವನ್ನೇ ಮುಂದುವರಿಸುತ್ತಿದ್ದರು. ಅಪ್ಪ ಅಮ್ಮನ ಹಾಗೇ ಮಕ್ಕಳಿಬ್ಬರೂ ಸೌಮ್ಯ ಸ್ವಭಾವದವರು. ಗಂಡು ಮಕ್ಕಳಾದರೂ ಮನೆಗೆಲಸಗಳಲ್ಲಿ ಅಮ್ಮನಿಗೆ ನೆರವಾಗುತ್ತಿದ್ದರು. ಶಶಾಂಕ್ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದ. ಅವನ ಬುದ್ಧಿಮತ್ತೆಯಿಂದಾಗಿ, ಹಂತಹಂತವಾಗಿ ಮೇಲೇರಿ, ಒಳ್ಳೆಯ ಉನ್ನತ ಹುದ್ದೆಯಲ್ಲಿದ್ದನವನು. ಸ್ವಂತ ಮನೆಯನ್ನೂ ಮಾಡಿಕೊಂಡಿದ್ದ. ಗೌತಮ್ ಬಿಕಾಂ, ಎಂಬಿಎ ಮುಗಿಸಿ ಬೆಂಗಳೂರಿನಲ್ಲಿಯೇ ಉದ್ಯೋಗಕ್ಕೆ ಸೇರಿದ್ದನಷ್ಟೇ. ಅಣ್ಣ ಶಶಾಂಕನ ಜೊತೆಯೇ ವಾಸವಾಗಿದ್ದ.
ಶಶಾಂಕನಿಗೀಗ ಮೂವತ್ತು ವರ್ಷ ನಡೆಯುತ್ತಿದೆ. ಆದರೂ ಮದುವೆಯ ಬಗ್ಗೆ ಚಕಾರವೆತ್ತುತ್ತಿಲ್ಲ ಅನ್ನುವುದೇ ರಜನಿಯ ಕೊರಗಾಗಿತ್ತು. “ಏನು ಮೇಡಂ, ಮಗನ ಮದುವೆ ಯಾವಾಗ? ನಮಗೆಲ್ಲಾ ಯಾವಾಗ ಹೋಳಿಗೆ ಊಟ ಹಾಕಿಸ್ತೀರಾ?” ಅಂತ ಸಹೋದ್ಯೋಗಿಗಳು ಪ್ರಶ್ನಿಸಿದಾಗಲೆಲ್ಲಾ ರಜನಿಯ ಮುಗುಳುನಗು ಉತ್ತರವಾಗಿತ್ತು. ಶಶಾಂಕನಿಗೆ ಇಪ್ಪತ್ತೇಳು ವರ್ಷ ತುಂಬಿದ ಸಮಯದಲ್ಲಿ ಒಂದು ದಿನ ರಜನಿಯೇ “ಶಶಾಂಕ್, ನಿನ್ನ ಸಹಪಾಠಿ ಹುಡುಗರೆಲ್ಲಾ ಮದುವೆಯಾಗುತ್ತಿದ್ದಾರೆ. ನಿನಗೂ ಮದುವೆಯ ವಯಸ್ಸಾಯಿತು. ನಾವಾಗಿ ಕೇಳದಿದ್ದರೂ, ಕೆಲವೊಂದು ಸಂಬಂಧಗಳು ಬಂದಿವೆ” ಅಂದಾಗ “ಅಯ್ಯೋ, ಬೇಡಮ್ಮಾ. ನನಗೀಗ ಮದುವೆ ಬೇಡ” ಅಂದಿದ್ದ ಶಶಾಂಕ್. “ಯಾವ ಹುಡುಗಿಯನ್ನಾದರೂ ಪ್ರೀತಿಸಿದ್ದರೆ ಹೇಳು. ಅದನ್ನು ಹೇಳಲು ಮುಜುಗರಪಟ್ಟು ಮದುವೆ ಬೇಡವೆಂದು ಹೇಳ್ತಿಲ್ಲ ತಾನೇ?” ಛೇಡಿಸಿದ್ದಳು ರಜನಿ. “ಹಾಗೇನಾದರೂ ಇದ್ದಿದ್ದರೆ ನಿಮ್ಮ ಹತ್ತಿರ ನೇರವಾಗಿ ಹೇಳುತ್ತಿದ್ದೆ. ಒಟ್ಟಿನಲ್ಲಿ ನನಗೀಗ ಮದುವೆ ಬೇಡ ಅಷ್ಟೇ” ಅನ್ನುವ ಮಗನ ಮಾತನ್ನು ಕೇಳಿದ ರಜನಿಯ ಮುಖ ಸಪ್ಪಗಾಗಿದ್ದನ್ನು ಕಂಡು ಶಶಾಂಕ್ ಮುಂದುವರೆದು “ಅಮ್ಮಾ, ನನ್ನ ನಿರ್ಧಾರ ಕೇಳು. ಮದುವೆ ಆಗಬೇಕು ಅನ್ನಿಸಿದಾಗ ನಾನೇ ಹೇಳುತ್ತೇನೆ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ” ಅಂದಿದ್ದ. ಮಗನ ಸ್ಪಷ್ಟ ನಿರ್ಧಾರದ ಬಗ್ಗೆ ಅರಿವಿದ್ದ ರಜನಿ ಸುಧಾಮ ದಂಪತಿಗಳು ತಮ್ಮ ಪಾಡಿಗೆ ತಾವಿದ್ದರು.
3
ಅದೊಂದು ದಿನ ಸೋಮವಾರ ರಜನಿ ಕಾಲೇಜಿನಲ್ಲಿ ಇರುವಾಗಲೇ ಶಶಾಂಕನ ದೂರವಾಣಿ ಕರೆ. ಗಾಬರಿಯಲ್ಲಿ ಫೋನ್ ಕರೆ ಸ್ವೀಕರಿಸಿ “ಏನಾಯ್ತು ಶಶಾಂಕ್? ಈ ಹೊತ್ತಿನಲ್ಲಿ ಫೋನ್ ಮಾಡಿದ್ದು?” ಪ್ರಶ್ನಿಸಿದಳು ರಜನಿ. “ಅದೂ….ಅದೂ….” ರಾಗವೆಳೆದ ಶಶಾಂಕ. “ಪರವಾಗಿಲ್ಲ ಹೇಳು” ಅಂದಳು ರಜನಿ. “ಅಮ್ಮ, ನನಗೋಸ್ಕರ ಎರಡು ದಿನ ರಜೆ ಮಾಡಬಹುದೇ? ನಾನೊಂದು ಹುಡುಗಿ ನೋಡಿದ್ದೇನೆ. ಬರುವ ಆದಿತ್ಯವಾರ ಶಿವಮೊಗ್ಗದಲ್ಲಿರುವ ಹುಡುಗಿ ಮನೆಗೆ ಹೋಗಬೇಕು. ಅಪ್ಪನ ಬಳಿ ಮಾತನಾಡಿದ್ದೇನೆ. ನೀನು ಹ್ಞೂಂ ಅಂದರೆ ಈಗಲೇ ಹುಡುಗಿ ಮನೆಗೆ ತಿಳಿಸುತ್ತೇನೆ” ಅಂದ ಶಶಾಂಕ್. ಒಂದೆಡೆ ಸಂತೋಷ ಉಕ್ಕಿದರೆ ಇನ್ನೊಂದೆಡೆ ಗೊಂದಲ. ಕೊನೆಗೂ ಮಗ ಮದುವೆ ಆಗುವ ನಿರ್ಧಾರಕ್ಕೆ ಬರುತ್ತಿದ್ದಾನಲ್ವಾ ಅಂತ. “ಸರಿ, ರಜೆ ಮಾಡುವೆ” ರಜನಿ ಅನ್ನುತ್ತಿದ್ದಾಗಲೇ “ಥಾಂಕ್ಸ್ ಅಮ್ಮ” ಹೇಳಿ ಕರೆ ತುಂಡರಿಸಿದ್ದ ಶಶಾಂಕ್. ಆ ದಿನ ಸಂಜೆ ಮನೆಗೆ ಬಂದ ನಂತರ ಪುನಃ ಶಶಾಂಕನಿಗೆ ಫೋನ್ ಮಾಡಿ ಹುಡುಗಿ ಬಗ್ಗೆ ವಿಚಾರಿಸಿದಾಗ “ಈಗ ಏನೂ ಹೇಳುವುದಿಲ್ಲ. ಆದಿತ್ಯವಾರ ನೀವೇ ನೋಡುತ್ತೀರಲ್ಲಾ. ಅಲ್ಲಿ ತನಕ ಸಸ್ಪೆನ್ಸ್” ಅನ್ನುವ ಶಶಾಂಕನ ಉತ್ತರ ಕೇಳಿ “ವಾಟ್ಸಾಪಿನಲ್ಲಿ ಹುಡುಗಿ ಫೋಟೊ ಆದ್ರೂ ಕಳಿಸು” ಗೋಗರೆದಳು ರಜನಿ. “ಟೋಟಲ್ ಸಸ್ಪೆನ್ಸ್. ಆದಿತ್ಯವಾರ ತನಕ ತಡೆದುಕೋ. Bye. See you on Saturday” ಫೋನಿಟ್ಟ ಶಶಾಂಕ್.
4
ಶನಿವಾರ ತಮ್ಮ ಗೌತಮನೊಡನೆ ಮನೆಗೆ ಬಂದ ಶಶಾಂಕನ ಹತ್ತಿರ “ಹುಡುಗಿ ಫೋಟೋ ತೋರಿಸು” ದುಂಬಾಲು ಬಿದ್ದರೂ “ಹೇಗಿದ್ದರೂ ನಾಳೆ ನೋಡುತ್ತಿಯಲ್ವಾ” ಅಂತ ರಜನಿಯ ಆಸೆಗೆ ತಣ್ಣೀರೆರಚಿದ್ದ. ಮರುದಿನ ಬೆಳಿಗ್ಗೆ ಎಲ್ಲರೂ ಹೊರಟು ಶಿವಮೊಗ್ಗದಲ್ಲಿರುವ ಹುಡುಗಿ ಮನೆಗೆ ತಲುಪಿದರು. ಉಭಯ ಕುಶಲೋಪರಿಯಾದ ನಂತರ ರಜನಿ “ಹುಡುಗಿ ಎಲ್ಲಿ?” ಅಂದಾಗ ಹುಡುಗಿಯ ತಂದೆ ಪರಮೇಶ್ವರಯ್ಯನವರು ಹೆಂಡತಿ ಪೂರ್ಣಿಮಾಳ ಹತ್ತಿರ “ಶರಣ್ಯನನ್ನು ಕರೆದುಕೊಂಡು ಬಾ” ಅಂದರು. ರಜನಿಯ ಕಣ್ಣು ಹುಡುಗಿ ಬರುವತ್ತಲೇ. ಮೈಯೆಲ್ಲಾ ಕಣ್ಣಾಗಿ ನೋಡುತ್ತಿರಲು ಗಾಢನೀಲಿ ಬಣ್ಣದ ಸೀರೆಯುಟ್ಟ ಸುಂದರಿ ಶರಣ್ಯ ಬಂದು ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿದಳು. ರಜನಿ ಹುಡುಗಿಯನ್ನು ನೋಡುತ್ತಲೇ ಅವಾಕ್ಕಾದಳು. “ಅಯ್ಯೋ, ದೇವರು ಯಾಕೆ ಈ ರೀತಿ ಈ ಮುದ್ದು ಮುಖದ ಹುಡುಗಿಗೆ ಅನ್ಯಾಯ ಮಾಡಿದ” ಅನ್ನುವ ಆಲೋಚನೆ ಮನದಲ್ಲಿ.
ಸುಧಾಮ- ರಜನಿ ದಂಪತಿಗಳ ಮುಖದ ಬಣ್ಣ ಬದಲಾದದ್ದು ಪರಮೇಶ್ವರಯ್ಯ ಪೂರ್ಣಿಮಾ ದಂಪತಿಗಳ ಗಮನಕ್ಕೂ ಬಂತು. ಕೂಡಲೇ ಎಚ್ಚೆತ್ತುಕೊಂಡ ಪೂರ್ಣಿಮಾ “ದೇವರು ಶರಣ್ಯನಿಗೆ ಅನ್ಯಾಯ ಮಾಡಿದ. ಹುಟ್ಟುವಾಗಲೇ ಅವಳಿಗೆ ಬಲ ಮುಂಗೈ ಇಲ್ಲ. ಆದರೆ ಶರಣ್ಯನಿಗೆ ಇದು ಸಮಸ್ಯೆಯೇ ಅಲ್ಲ. ಪ್ರತಿಯೊಂದು ಕೆಲಸವನ್ನು ಅವಳೇ ಮಾಡಿಕೊಳ್ತಾಳೆ” ಅಂದರು. ಪರಮೇಶ್ವರಯ್ಯ-ಪೂರ್ಣಿಮಾ ದಂಪತಿಗಳ ಆತಿಥ್ಯ ಸ್ವೀಕರಿಸಿ ಆದಷ್ಟು ಬೇಗ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಅಲ್ಲಿಂದ ಹೊರಟರು ಶಶಾಂಕನ ಮನೆಯವರು.
ಮನೆಗೆ ವಾಪಸ್ ಬಂದ ನಂತರ “ಅಪ್ಪ-ಅಮ್ಮ ಇಬ್ಬರೂ ಸರಿಯಾಗಿ ಕೇಳಿ. ನನಗೆ ಶರಣ್ಯ ಹಿಡಿಸಿದ್ದಾಳೆ. ಮದುವೆ ಆದರೆ ಅವಳನ್ನೇ. ಇದು ನನ್ನ ನಿರ್ಧಾರ. ನನ್ನ ನಿರ್ಧಾರಕ್ಕೆ ನೀವೆಲ್ಲಾ ಒಪ್ಪುವಿರೆಂಬ ನಂಬಿಕೆ ನನ್ನದು” ಅನ್ನುವ ಶಶಾಂಕನ ಮಾತು ಕೇಳಿ ರಜನಿಯ ಮನಸ್ಸಿನಲ್ಲಿ ಹೇಳಲಾಗದ ಸಂಕಟ, ಏನೋ ಅವ್ಯಕ್ತ ವೇದನೆ. ಮಗ ಮದುವೆ ಆಗಲು ಒಪ್ಪಿದ ಸಂತೋಷ ಒಂದೆಡೆ. ಆದರೂ ಬಲ ಕೈ ಇಲ್ಲದ ಹುಡುಗಿಯನ್ನು ಮದುವೆಯಾದರೆ ನನ್ನ ಮಗ ಕಷ್ಟಪಡಬೇಕಲ್ಲವೇ ಅನ್ನುವ ಮಾತೃ ಹೃದಯದ ಸಂಕಟ. ಸುಧಾಮ ನೋಡಿದರೆ ಏನೂ ಆಗದ ಹಾಗೆ ಕುಳಿತಿದ್ದಾರೆ. ರಜನಿ ಏಕಾಂತದಲ್ಲಿ ಗಂಡನ ಜೊತೆ “ನೀವಾದರೂ ಶಶಾಂಕನಿಗೆ ಬುದ್ಧಿ ಹೇಳಿ” ಅಂದಾಗ “ಶಶಾಂಕನೇನೂ ಎಳೆಮಗುವಲ್ಲ. ಮದುವೆಯಾಗುವವನು ಅವನು. ಎಲ್ಲಾ ಆಲೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರುತ್ತಾನೆ ಅವನು. ಬೇಡ ಹೇಳಿ ಅವನ ಮನಸ್ಸು ಯಾಕೆ ನೋಯಿಸುವುದು” ಅಂದುಬಿಟ್ಟರು ಸುಧಾಮ. ರಜನಿಯ ತಳಮಳ ಇನ್ನೂ ಜಾಸ್ತಿ ಆಯಿತು. ರಾತ್ರಿಯಿಡೀ ನಿದ್ರೆ ಬರದೆ ಹೊರಳಾಡಿದ ರಜನಿ ಮರುದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ದೇವರಿಗೆ ನಮಸ್ಕರಿಸಿ ಬಂದಾಗಲೇ ಶಶಾಂಕ್ ಕಾಫಿಯ ಲೋಟ ಹಿಡಿದು ನಿಂತಿದ್ದ. “ಅಮ್ಮ, ನಿಮ್ಮಿಬ್ಬರ ನಿರ್ಧಾರ ಹೇಳಿ. ಶರಣ್ಯ ತುಂಬಾ ಚುರುಕಿದ್ದಾಳೆ. ಪ್ರತಿಭಾವಂತೆ. ಸಂಗೀತ, ಸಾಹಿತ್ಯ ಎಲ್ಲದರಲ್ಲೂ ಮುಂದು. ಬಲಕೈ ಇಲ್ಲ ಅನ್ನುವುದು ಮಾತ್ರ ಕೊರತೆ. ನಾನೇ ಅವಳ ಬಲಕೈ ಆಗುವೆ. ಅದರಲ್ಲಿ ಏನಾದರೂ ತಪ್ಪಿದೆಯೇ? ದಯವಿಟ್ಟು ಇಲ್ಲ ಅನ್ನಬೇಡಿ” ಅನ್ನುವ ಬೇಡಿಕೆಗೆ “ಆಯ್ತು. ನಮ್ಮ ಮಗನ ಸಂತೋಷವೇ ನಮ್ಮ ಸಂತೋಷ. ಇವತ್ತೇ ತಿಳಿಸಿಬಿಡು. ಶುಭಸ್ಯ ಶೀಘ್ರಂ” ಅಂದಳು ರಜನಿ.
5
ಶಶಾಂಕ್- ಶರಣ್ಯ ಮದುವೆಯಾಗಿ ಹತ್ತು ವರ್ಷಗಳೇ ಕಳೆದಿವೆ. ಬೆಂಗಳೂರಿನ ಉದ್ಯೋಗ ಬಿಟ್ಟು, ತಂದೆ ನಡೆಸುವ ವ್ಯವಹಾರ ಮುಂದುವರೆಸುತ್ತಿದ್ದಾನೆ ಶಶಾಂಕ್. ರಜನಿ ಉದ್ಯೋಗದಿಂದ ನಿವೃತ್ತಿ ಆಗಿ ಐದು ವರ್ಷಗಳಾಗಿವೆ. ಮೊಮ್ಮಕ್ಕಳಾದ ಪ್ರಣತಿ ಹಾಗೂ ದೀಪಕ್ ಆರೈಕೆ, ಅವರೊಡನೆ ಆಟ. ಮಕ್ಕಳು ನಿದ್ದೆ ಹೋದಾಗ ಸೊಸೆ ಪರಿಚಯಿಸಿದ ಕಥಾ ಅರಮನೆ, ಅಡುಗೆ ಅರಮನೆ, ನಮ್ಮ ಮನೆ ಕೈತೋಟ ಮುಂತಾದ ಫೇಸ್ಬುಕ್ ಗುಂಪುಗಳಲ್ಲಿ ಸಮಯ ಕಳೆಯುವ ರಜನಿ-ಸುಧಾಮ ದಂಪತಿಗಳೀಗ ಸುಖಿಗಳು. ಶರೀರದ ಊನವನ್ನು ಮೆಟ್ಟಿ ನಿಂತು ಉಳಿದ ದಿವ್ಯಾಂಗರ ಬದುಕಿಗೆ ಮಾದರಿ ಹಾಗೂ ಆದರ್ಶಪ್ರಾಯಳಾಗಿದ್ದ ಶರಣ್ಯಾಳನ್ನು ವರಿಸುವ ಮಗನ ಆದರ್ಶಪ್ರಾಯ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ನಿರ್ಧಾರ ಮಾಡಿದ ರಜನಿ- ಸುಧಾಮ ದಂಪತಿಗಳೂ ಆದರ್ಶಪ್ರಾಯರಾದರು.
ಡಾ. ಕೃಷ್ಣಪ್ರಭ ಮಾಪಾಲ
1 thought on “ಆದರ್ಶಪ್ರಾಯರು”
I don’t think the title of your article matches the content lol. Just kidding, mainly because I had some doubts after reading the article.